ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು
ಉಪಸ್ಥಿತಿ: 1. ಶ್ರೀಮತಿ ಎಂ.ಶೋಬಾ, ಅಧ್ಯಕ್ಷರು,
2. ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ, ಮಹಿಳಾ ಸದಸ್ಯರು,
3. ಶ್ರೀ ಹೆಚ್.ಜನಾರ್ಧನ್, ಸದಸ್ಯರು
ಆದೇಶ
ಸಿ.ಸಿ.ಸಂಖ್ಯೆ:128/2022
ಆದೇಶ ದಿನಾಂಕ 17ನೇ ನವೆಂಬರ್ 2022
ಶ್ರೀ ಪ್ರತೀಕ್ ಪರಷರ್,
17ಎ, ಪಾರಿಜಾತ, 6ನೇ ಎ ಮೇನ್,
12ನೇ ಎ ಕ್ರಾಸ್, ಜೆ.ಪಿ.ನಗರ, 3ನೇ ಫೇಸ್,
ಬೆಂಗಳೂರು 560 078.
(ಪಾರ್ಟಿ ಇನ್ ಪರ್ಸನ್)
-ಪಿರ್ಯಾದುದಾರರು
ವಿರುದ್ಧ
ಟಾಕ್ ಸ್ಟೂಡಿಯೋ ಪ್ರೈವೆಟ್ ಲಿಮಿಟೆಡ್,
ನಂ.77, 1ನೇ ಮೇನ್ ರಸ್ತೆ, ಉರುಕುಪ್ಪಮ್, ಬೆಸಂಟ್ ನಗರ,
ಚೆನೈ, ತಮಿಳುನಾಡು 600 090.
ಅಧಿಕಾರ ವಹಿಸುವುದು
(ಗೈರುಹಾಜರಾಗಿರುತ್ತಾರೆ)
… ಎದುರುದಾರರು
ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ
ಮಹಿಳಾ ಸದಸ್ಯರು,
ದೂರುದಾರರು ಎದುರುದಾರರ ಮೇಲೆ ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರ ಕಲಂ 35 ರ ಅಡಿಯಲ್ಲಿ ದೂರನ್ನು ಸಲ್ಲಿಸಿದ್ದು, ಈ ಕೆಳಗಿನಂತೆ ಆದೇಶಿಸಲು ಕೋರಿರುತ್ತಾರೆ.
ದೂರುದಾರರು ಎದುರುದಾರರ ವಿರುದ್ದ, ದೂರುದಾರರಿಗೆ ಸರಿಯಾದ ಸೇವೆಯನ್ನು ನೀಡಿಲ್ಲ, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪ್ರಮುಖವಾಗಿ ಈ ವಿಷಯವಾಗಿ ಸರಿಯಾಗಿ ಪರಿಶೀಲಿಸಲು ಎದುರುದಾರರಿಗ ನಿರ್ದೇಶಿಸಿ ಮತ್ತು ಭರವಸೆ ನೀಡಿದ ಸಮಯದೊಳಗೆ ಸರಕುಗಳ ವಿತರಣೆಯನ್ನು ಒದಗಿಸಿಲ್ಲ ಮತ್ತು ಪದೇ ಪದೇ ಪೂರೈಸಲು ವಿಫಲವಾದ ಮುಂದಿನ ದಿನಾಂಕಕ್ಕೆ ಸರಕುಗಳ ವಿತರಣೆಯನ್ನು ಸಮಯಕ್ಕೆ ಸರಿಯಾಗಿ ಹಿಂದಿರುಗಿಸುವಂತೆ ನಿರ್ದೇಶಿಸಬೇಕೆಂದು
1. ಭರವಸೆ ನೀಡಿದ ಸಮಯದೊಳಗೆ ಸರಕನ್ನು ತಲುಪಿಸದಿದ್ದಕ್ಕಾಗಿ ದೂರುದಾರರಿಗೆ ಪರಿಹಾರ ರೂಪವಾಗಿ ರೂ.28,999/- ಒದಗಿಸಲು ಎದುರುದಾರರಿಗೆ ನಿರ್ದೇಶಿಸಿ ಮತ್ತು ದೂರುದಾರರಿಗೆ ನಿರಂತರ ಮಾನಸಿಕ ಕಿರುಕುಳ ಮತ್ತು ಸಂಕಟ ಮತ್ತು ಸಮಯಾವಕಾಶ ಮತ್ತು ಹಣದ ನಷ್ಟ ಮಾಡಿದ್ದಕ್ಕಾಗಿ ಪರಿಹಾರ ಕೋರಿರುತ್ತಾರೆ ಮತ್ತು
2. ದಾವೆಯ ವೆಚ್ಚವನ್ನು ಪಾವತಿಸಲು ಎದುರುದಾರರಿಗೆ ನಿರ್ದೇಶಿಸಿ ಇತರೆ ಸೌಲಭ್ಯಗಳು ಇದ್ದಲ್ಲಿ ನೀಡಬೇಕೆಂದು ಕೋರಿರುತ್ತಾರೆ.
2. ದೂರುದಾರನ ದೂರಿನ ಅಂಶಗಳು ಈ ಕೆಳಗಿನಂತೆ ಇರುತ್ತವೆ:-
ದೂರುದಾರರು ಸ್ಮಾಟ್ ಟೇಬಲ್ ಅನ್ನು ಖರೀದಿಸಲು TAKK Smart Dest 4 Feet – BERLIN47-Malaysian Oak/PDU+Wireless Charger+UVC ಸರಕನ್ನು ಖರೀದಿಸಲು ದಿನಾಂಕ 06.01.2022ರಂದು ವೆಬ್‍ಸೈಟ್ ಮೂಲಕ ರೂ.28.999/- ಗಳನ್ನು ಎದುರುದಾರರಿಗೆ ಪಾವತಿಸಿದ್ದು, ಇದಕ್ಕೆ ಪ್ರತಿಯಾಗಿ ಎದುರುದಾರರು 15 ರಿಂದ 20 ದಿನಗಳಲ್ಲಿ ಸರಕಿನ ವಿತರಣೆಯ ಭರವಸೆಯನ್ನು ನೀಡಿರುತ್ತಾರೆ. ಇದರ ಜೊತೆಗೆ ಷರತ್ತನ್ನು ವಿಧಿಸಿರುತ್ತಾರೆ. ಆದರೆ ಕೋವಿಡ್ 19 ಮತ್ತು ಇತರೆ ಕಾರಣಕ್ಕಾಗಿ ಸೇವೆಗಳ ಅನಿಶ್ಚಿತೆಯ ಕಾರಣದಿಂದಾಗಿ 10 ರಿಂದ 25 ದಿನಗಳ ವಿಳಂಬವಾಗಬಹುದು ಮತ್ತು ಭಾರತದಾದ್ಯಂತ ಕೆಲವು ಪಿನ್ ಕೋಡ್‍ಗಳಿಗೆ ತೊಂದರೆಯಾಗಿರುವುದರಿಂದ ದೂರುದಾರರು ಹೇಳಿದ ಸರಕುಗಳ ವಸ್ತುಸ್ಥಿತಿ ಮತ್ತು ಸಮಯೋಚಿತ ರವಾನೆಗಾಗಿ ನಾಲ್ಕು ತಿಂಗಳ ಅವಧಿಯಲ್ಲಿ ಹಲವು ಬಾರಿ ಅನುಸರಿಸಿದ ನಂತರವೂ ಎದುರುದಾರರು ನಿರ್ವಹಣೆಗೆ ಸಂಬಂಧಿಸಿದ ವಿಷಯಗಳಿಂದ ಗುಣಮಟ್ಟದ ತಪಾಸಣೆಯ ಸಮಸ್ಯೆಗಳಿಗೆ ವಿವಿಧ ಕಾರಣಗಳನ್ನು ಉಲ್ಲೇಖಿಸಿ ಸರಕನ್ನು ವಿತರಣೆ ಮಾಡಿಲ್ಲ. ಅಲ್ಲದೇ ಈಮೇಲ್ ಮತ್ತು ವಾಟ್ಸ್‍ಅಪ್ ಮೂಲಕ ಅನುಸರಣೆಯ ನಂತರವೂ ಎದುರುದಾರರು ದೂರುದಾರರಿಂದ ಸರಕಿನ ಪೂರ್ತಿ ಮೊತ್ತವನ್ನು ಸ್ವೀಕರಿಸಿದ ನಂತರವೂ ಸರಕನ್ನು ಪೂರೈಸದೇ ಅಥವಾ ಮೊತ್ತವನ್ನು ಮರುಪಾವತಿಸದೇ ಎದುರುದಾರರು ತಮ್ಮ ಈ ಮೇಲ್ ಸಂದೇಶದಲ್ಲಿ ಸರಕಿನ ಆದೇಶವಾಗಿರುವುದರಿಂದ ರದ್ದುಗೊಳಿಸಲಾಗುವುದಿಲ್ಲ ಮತ್ತು ಪೂರ್ವ ಆದೇಶವಿರುವುದರಿಂದ ಮೊತ್ತವನ್ನು ಮರುಪಾವತಿಯನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ ಎಂದು ದಿನಾಂಕ 30.03.2022ರಂದು ತಿಳಿಸಿದಾಗ ಎದುರುದಾರರು ಗ್ರಾಹಕ ಸಂರಕ್ಷಣಾ 2019 ಇ-ಕಾಮರ್ಸ್ ನಿಯಮಗಳ ನಿಯಮ 6(3) ಅನ್ನು ಉಲ್ಲಂಘಿಸಿದ್ದಾರೆ. ಪ್ರತಿ ಬಾರಿ ವಿತರಣಾ ಗಡುವನ್ನು ಮುಂದುವರೆಸುತ್ತಾ, ನಾಲ್ಕು ತಿಂಗಳಿನಿಂದ ಪೂರೈಸದೇ ಇದ್ದಾಗ ಸೂಕ್ತ ಕಾನೂನು ಕ್ರಮಗೊಳ್ಳುವುದಕ್ಕಾಗಿ ಈಮೇಲ್ ಮತ್ತು ಸ್ಕ್ರೀನ್‍ಶಾಟ್‍ಗಳ ಮೂಲಕ ಎದುರುದಾರರಿಗೆ ಕಳುಹಿಸಿದ್ದು, ಅಂತಿಮವಾಗಿ 17.04.2022ರಂದು ತಿಳಿಸಿದ್ದು, ಇದಕ್ಕೆ ಎದುರುದಾರರು ಮತ್ತೆ ಸಮಯಾವಕಾಶವನ್ನು ಕೇಳಿಕೊಂಡಿದ್ದು, ಇದರಿಂದ ದೂರುದಾರರು ಮಾನಸಿಕವಾಗಿ ನೊಂದು ಮತ್ತು ಎದುರುದಾರರಿಂದ ಮೋಸಹೋಗಿದ್ದಾರೆಂದು ಪರೀಕ್ಷೆಯ ಸಮಯಕ್ಕೆ ಸರಕನ್ನು ವಿತರಿಸದೇ ಸೇವಾ ನ್ಯೂನತೆ ಎಸಗಿದ್ದಾರೆಂದು ಮತ್ತು ನಿರ್ಲಕ್ಷ್ಯತನವನ್ನು ತೋರಿದ್ದಾರೆಂದು ಅಲ್ಲದೇ ಇ-ಕಾಮರ್ಸ್ ನಿಯಮ 4(3) ಅಡಿಯಲ್ಲಿ ದುರ್ನಡತೆ ವ್ಯಾಪಾರ ಎಸಗಿದ್ದಾರೆಂದು ನಿಗದಿತ ಸಮಯಕ್ಕೆ ಸರಕನ್ನು ವಿತರಿಸಲು ವಿಫಲರಾಗಿದ್ದಾರೆಂದು ಈ ಆಯೋಗಕ್ಕೆ ದೂರು ಸಲ್ಲಿಸಿ ಪರಿಹಾರ ಕೊಡಿಸಬೇಕೆಂದು ಪ್ರಾರ್ಥಿಸಿರುತ್ತಾರೆ.
3. ದೂರುದಾರರು ಕೊಟ್ಟ ದೂರನ್ನು ನೊಂದಾಯಿಸಿಕೊಂಡು ಎದುರುದಾರನಿಗೆ ನೋಟೀಸು ನೀಡಲಾಗಿ ಸದರಿ ನೋಟೀಸ್ ಜಾರಿಯಾಗಿದ್ದರು ಎದುರುದಾರರು ಈ ಆಯೋಗದ ಮುಂದೆ ಹಾಜರಾಗಿರುವುದಿಲ್ಲ, ಆದ್ದರಿಂದ ಇವರನ್ನು ಏಕಪಕ್ಷೀಯವಾಗಿ ಇಡಲಾಗಿದೆ.
4. ದೂರುದಾರರು ಆಯೋಗಕ್ಕೆ ಹಾಜರಾಗದೇ ಎಷ್ಟೋ ಸಮಯಾವಕಾಶವನ್ನು ನೀಡಿದ್ದರೂ ನುಡಿ ಸಾಕ್ಷ್ಯವನ್ನು ನೀಡದೆ ಖಾಲಿ ದಾಖಲಾತಿಗಳನ್ನು (ಈಮೇಲ್ ಸಂವಹನ ಪುಟ 1 ರಿಂದ 51ರವರೆಗೆ) ನೀಡಿರುತ್ತಾರೆ. ದೂರುದಾರರು ನುಡಿಸಾಕ್ಷ್ಯವನ್ನು ನೀಡದೇ ಇದ್ದ ಕಾರಣಕ್ಕಾಗಿ ದಾಖಲೆಗಳ ಮತ್ತು ಅರ್ಹತೆಯ ಮೇರೆಗೆ ತೀರ್ಪಿಗಾಗಿ ಇಡಲಾಗಿದೆ.
5. ಈ ಕೆಳಕಂಡ ಅಂಶಗಳು ನಮ್ಮ ತೀರ್ಮಾನಕ್ಕಾಗಿ ಮೂಡಿ ಬಂದಿವೆ.
(1) ದೂರುದಾರನು ಎದುರುದಾರರ ಕರ್ತವ್ಯ ಲೋಪ, ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಿ ಮತ್ತು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎನ್ನುವ ಸಂಗತಿಯನ್ನು ಸಾಬೀತು ಪಡಿಸಿದ್ದಾರೆಯೇ? ಹಾಗಿದ್ದಲ್ಲಿ ಆತ ಕೇಳಿಕೊಂಡ ಪರಿಹಾರಕ್ಕೆ ಅರ್ಹರೇ?
(2) ಆದೇಶ ಏನು?
6. ಮೇಲ್ಕಂಡ ಅಂಶಗಳನ್ನು ಈ ಕೆಳಕಂಡ ಕಾರಣಕ್ಕಾಗಿ ಈ ರೀತಿ ನಿರ್ಣಯಿಸಿದ್ದೇವೆ.
• 1ನೇ ಅಂಶ - ಸಕಾರಾತ್ಮಕವಾಗಿ
• 2ನೇ ಅಂಶ - ಅಂತಿಮ ತೀರ್ಪಿನ ಪ್ರಕಾರ
ಕಾರಣಗಳು
7. 1 ನೇ ಅಂಶದ ಮೇಲೆ:- ದೂರುದಾರರು ನೀಡಿರುವ ದೂರನ್ನು ಸುದೀರ್ಘವಾಗಿ ಪ್ಯಾರಾ 2ರಲ್ಲಿ ವಿವರಿಸಲಾಗಿದೆ. ಎದುರುದಾರರಿಗೆ ಈ ಆಯೋಗದಿಂದ ನೋಟೀಸ್ ಜಾರಿಯಾಗಿದ್ದರೂ ಎದುರುದಾರರು ಗೈರು ಹಾಜರಾಗಿರುತ್ತಾರೆ. ಆದ್ದರಿಂದ ಎದುರುದಾರರನ್ನು ಏಕಪಕ್ಷೀಯವಾಗಿ ಇಡಲಾಗಿದೆ. ದೂರುದಾರರು ಸಲ್ಲಿಸಿರುವ ದೂರನ್ನು ಮತ್ತು ದಾಖಲೆಗಳನ್ನು(ಪುಟ 1 ರಿಂದ 51ರವರೆಗೆ) ಕೂಲಂಕುಷವಾಗಿ ಪರಿಶೀಲಿಸಿದ್ದು, ಅವುಗಳ ಪುನರ್ ವಿಮರ್ಷೆಯ ಪ್ರಮೇಯ ಉದ್ಭವಿಸುವುದಿಲ್ಲ. ದೂರಿನಲ್ಲಿನ ಅಂಶಗಳನ್ನು ಎದುರುದಾರರು ಆಯೋಗದ ಮುಂದೆ ಹಾಜರಾಗಿ ಅಲ್ಲಗಳೆಯದೇ ಇರುವುದರಿಂದ ದೂರಿನಲ್ಲಿ ಹೇಳಿದ ಸಂಗತಿಗಳು ನಿಜವೆಂದು ಅಭಿಪ್ರಾಯಕ್ಕೆ ಬರಬಹುದೆಂದು ಮಾನ್ಯ ರಾಷ್ಟ್ರೀಯ ಗ್ರಾಹಕರ ಆಯೋಗವು 2018(1) ಸಿಪಿಆರ್ 314 ಎನ್‍ಸಿ ರಲ್ಲಿ ಸಿಂಗನಾಳ್ ಬಿಲ್ಡರ್ಸ್ ಮತ್ತು ಪ್ರಮೋಟರ್ಸ್ ಲಿಮಿಟೆಡ್ – ಅಮನ್ ಕುಮಾರ್ ಜಾರ್ಜ್ ಪ್ರಕರಣದಲ್ಲಿ ಉಲ್ಲೇಖಿಸಿರುತ್ತಾರೆ.
8. ದೂರುದಾರರು ಎದುರುದಾರರ ಮೇಲೆ ಮಾಡಿದ ಆಪಾದನೆಯನ್ನು ಸಾಬೀತುಪಡಿಸಲು ಯಾವುದೇ ನುಡಿ ಸಾಕ್ಷ್ಯವನ್ನು ಹಾಜರುಪಡಿಸಿರುವುದಿಲ್ಲ ಮತ್ತು ಅನುಬಂಧ 1 ಮತ್ತು 2 ಅನ್ನು ಹಾಜರುಪಡಿಸಿರುತ್ತಾರೆ. ದಾಖಲೆಗಳ ಅರ್ಹತೆ ಮೇರೆಗೆ ತೀರ್ಪನ್ನು ಕಾಯ್ದಿರಿಸಲಾಗಿರುತ್ತದೆ.
9. ದೂರುದಾರರು ಎದುರುದಾರರ ಮೂಲಕ ತನ್ನ ಸ್ವಂತ ಉಪಯೋಗಕ್ಕಾಗಿ ಸರಕನ್ನು ಖರೀದಿಸಲು ವೆಬ್ ಸೈಟ್ ಮೂಲಕ TAKK Smart Dest 4 Feet – BERLIN47-Malaysian Oak/PDU+Wireless Charger+UVC ಸರಕನ್ನು ಖರೀದಿಸಲು ಪುಟ 12ರ ಮೂಲಕ ರೂ.28,999/-ಗಳನ್ನು ದಿನಾಂಕ 06.01.2022ರಂದು ಪಾವತಿಸಿರುತ್ತಾರೆ. ಅಲ್ಲದೇ ಎದುರುದಾರರು 15 ರಿಂದ 20 ದಿನಗಳಲ್ಲಿ ಸರಕನ್ನು ಕಳುಹಿಸುವುದಾಗಿ ತಿಳಿಸಿ ಭರವಸೆ ನೀಡಿದ ಸಮಯಕ್ಕೆ ಸರಕನ್ನು ಕೊಡದೇ ಮತ್ತೆ ಸಮಯಾವಕಾಶವನ್ನು ಕೇಳಿ ಮಾರ್ಚ್ 19ರೊಳಗೆ ವಿತರಿಸುವುದಾಗಿ ತಿಳಿಸಿ ಆಗಲೂ ತಲುಪಿಸದೇ ಸರಿಯಾದ ಬಿಡಿಬಾಗಗಳು ಸಿಗದೇ ಇದ್ದ ಕಾರಣ ಮತ್ತು ಕೋವಿಡ್ 19 ರ ಸಮಸ್ಯೆಯಿಂದ ಭಾರತದ ಪಿನ್ ಕೋಡ್ ಸಿಗದೇ ಮತ್ತೆ ಸಮಯಾವಕಾಶ ಕೇಳಿ ಏಪ್ರಿಲ್ 17ನೇ 2022ರಂದು ಅಂತಿಮವಾಗಿ ಕಳುಹಿಸುವುದಾಗಿ ತಿಳಿಸಿದ್ದು, ಪುಟ 49 ಮತ್ತು 50 ರಂತೆ ಯಾವುದೇ ಸರಕನ್ನು ನೀಡದೆ, ಈ ಹಿಂದೆ ದೂರುದಾರರು ಮಾರ್ಚ್ ತಿಂಗಳಲ್ಲಿ ಎದುರುದಾರರು ಸಮಯಕ್ಕೆ ಸರಿಯಾಗಿ ಸರಕನ್ನು ಕೊಡದೇ ಇದ್ದ ಕಾರಣ ಪೂರ್ಣ ಮೊತ್ತವನ್ನು ಮರುಪಾವತಿಸದೇ ಇರುವ ಕಾರಣ ಪೂರ್ಣ ಮೊತ್ತವನ್ನು ಮರುಪಾವತಿಸುವಂತೆ ಇಮೇಲ್ ಕಳುಹಿಸಲಾಗಿ ಪುಟ 43ರಲ್ಲಿ ಎದುರುದಾರರು ಯಾವುದೇ ಕಾರಣಕ್ಕೆ ಆದೇಶವನ್ನು ರದ್ದುಪಡಿಸಲು ಬರುವುದಿಲ್ಲ ಮತ್ತು ಮೊತ್ತವನ್ನು ಮರುಪಾವತಿಸುವ ಪ್ರಕ್ರಿಯೇ ಇರುವುದಿಲ್ಲ, ನಾವು ಆದಷ್ಟು ಬೇಗ ಸರಕನ್ನು ಕಳುಹಿಸುವುದಾಗಿ ತಿಳಿಸಿ ದಿನಾಂಕ 30.03.2022ರಂದು ಇ ಮೇಲ್ ಕಳುಹಿಸಿದ್ದು, ಪುಟ 43ರಲ್ಲಿ ಇದರಿಂದ ದೂರುದಾರರು ಮನನೊಂದು ಅಂತಿಮವಾಗಿ ಈ ಆಯೋಗಕ್ಕೆ ದೂರುಸಲ್ಲಿಸಿರುತ್ತಾರೆ.
10. ಸಿ.ಪಿ.ಕಾಯ್ದೆ 2019ರ ನಿಯಮ 6(3) ಮತ್ತು 4(3)ರನ್ವಯ ಎದುರುದಾರರಿಗೆ ನಿರ್ದೇಶಿಸಿ ಈ ರೀತಿ ಇನ್ನು ಮುಂದೆ ಯಾವುದೇ ಗ್ರಾಹಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳುವಂತೆ ಮತ್ತು ಪರಿಹಾರ ರೂಪವಾಗಿ ಸರಕಿನ ಮೊತ್ತ ರೂ.28,999/- ಕೊಡುವಂತೆ ನಿರ್ದೇಶಿಸಬೇಕೆಂದು ಮಾನಸಿಕ ಹಿಂಸೆ ಹಾಗೂ ಸೇವಾ ನ್ಯೂನತೆಗಾಗಿ ಪರಿಹಾರ ಮತ್ತು ನ್ಯಾಯಾಲಯದ ಖರ್ಚು ಹಾಗೂ ಇತರ ಸೌಲಭ್ಯಗಳು ಇದ್ದಲ್ಲಿ ಕೊಡುವಂತೆ ಕೇಳಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ ಎದುರುದಾರರು ಈ ಆಯೋಗಕ್ಕೆ ಹಾಜರಾಗಿ ತಮ್ಮ ಸೇವಾ ನ್ಯೂನತೆಯನ್ನು ಸಾಬೀತುಪಡಿಸಲು ವಿಫಲರಾಗಿದ್ದು, ಅಲ್ಲದೇ ದೂರುದಾರರ ಹೇಳಿಕೆಯನ್ನು ಅಲ್ಲಗಳೆಯದೇ ಇರುವುದರಿಂದ ದೂರುದಾರರು ಪ್ರಾರ್ಥಿಸಿದಂತೆ ಭರವಸೆ ನೀಡಿದ ಸಮಯಕ್ಕೆ ಸರಕನ್ನು ಕೊಡದೇ ಮತ್ತು ಪೂರ್ಣ ಹಣವನ್ನು ಮರುಪಾವತಿಸದೇ ಸೇವಾ ನ್ಯೂನತೆ ಎಸಗಿದ್ದಾರೆಂದು ಇದನ್ನು ಎದುರುದಾರರು ಅಲ್ಲಗಳಯದೇ ಇರುವುದರಿಂದ ದೂರುದಾರರು ಪರಿಹಾರ ರೂಪದಲ್ಲಿ ಕೇಳಿರುವ ಮೊತ್ತ ರೂ.28,999/- ಗಳನ್ನು ಶೇಕಡ 6 ರ ಬಡ್ಡಿಯಂತೆ ಪಾವತಿಸಿದ ದಿನಾಂಕದಿಂದ ಮರುಪಾವತಿಯಾಗುವವರೆಗೆ ಆದೇಶಿಸಲಾಗಿದೆ. ಮಾನಸಿಕ ಹಿಂಸೆ ಹಾಗೂ ಸೇವಾ ನ್ಯೂನತೆಗಾಗಿ ರೂ.10,000/- ಗಳನ್ನು ಮತ್ತು ನ್ಯಾಯಾಲಯದ ಖರ್ಚು ರೂ.8,000/- ಗಳನ್ನು ನೀಡಲು ಆದೇಶಿಸಲಾಗಿದೆ. ಈ ಸಂಬಂಧ ಮಾನ್ಯ ರಾಷ್ಟ್ರೀಯ ಆಯೋಗದ ತೀರ್ಪು ಈ ಕೆಳಕಂಡಂತೆ ಇರುತ್ತದೆ.
EMAAR MGF Land Ltd., and another –vs- Amit Puri, II(2015 CPJ 568 (NC) wherein it is held that, after the promised date of delivery of possession, if the project is not completed, the discretion lies with the complainant whether he wants to take delivery of possession or seeks refund of earnest money.
ಈ ಕಾರಣಕ್ಕಾಗಿ 1ನೇ ಅಂಶವನ್ನು ಭಾಗಶ: ಸಕಾರಾತ್ಮಕವಾಗಿ ಉತ್ತರಿಸಲಾಗಿದೆ.
11. 2ನೇ ಅಂಶದ ಮೇಲೆ:- 1ನೇ ಅಂಶದಲ್ಲಿ ತಿಳಿಸಿರುವ ಕಾರಣಕ್ಕಾಗಿ ನಾವು ಈ ಕೆಳಗಿನಂತೆ ಆದೇಶವನ್ನು ಮಾಡುತ್ತೇವೆ.
ಆದೇಶ
1. ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಕಲಂ 35ರ ಅನ್ವಯ ದೂರನ್ನು ಭಾಗಶ: ಪುರಸ್ಕರಿಸಲಾಗಿದೆ.
2. ಎದುರುದಾರನು ದೂರುದಾರರಿಗೆ ಪರಿಹಾರ ರೂಪಾವಾಗಿ ಕೇಳಿಕೊಂಡಿರುವ ಮೊತ್ತ ರೂ.28,999/- ಗಳನ್ನು ಶೇಕಡ 6ರ ಬಡ್ಡಿಯಂತೆ ಬಡ್ಡಿಯಂತೆ ಪಾವತಿಸಿದ ದಿನಾಂಕದಿಂದ ಮರುಪಾವತಿಯಾಗುವವರೆಗೆ ನೀಡತಕ್ಕದ್ದು ಮತ್ತು ಮಾನಸಿಕ ಹಿಂಸೆ ಹಾಗೂ ಸೇವಾ ನ್ಯೂನತೆಗಾಗಿ ರೂ.10,000/- ಗಳನ್ನು ಹಾಗೂ ನ್ಯಾಯಾಲಯದ ಖರ್ಚು ರೂ.8,000/- ಗಳನ್ನು ಹಾಗೂ ಮೇಲೆ ಕಾಣಿಸಿದ ಹಣವನ್ನು ಈ ಆದೇಶದ ದಿನಾಂಕದಿಂದ 45 ದಿನಗಳೊಳಗೆ ಪಾವತಿಸತಕ್ಕದ್ದು, ತಪ್ಪಿದಲ್ಲಿ ದೂರು ಸಲ್ಲಿಸಿದ ದಿನಾಂಕದಿಂದ ರೂ.28,999/- ಗಳಿಗೆ ಮರುಪಾವತಿಯಾಗುವವರೆಗೆ ಶೇಕಡ 9 ರಂತೆ ವಾರ್ಷಿಕ ಬಡ್ಡಿ ಸಹಿತ ಪಾವತಿಸತಕ್ಕದ್ದು.
3. ದೂರಿನ ಹೆಚ್ಚುವರಿ ಪ್ರತಿಗಳನ್ನು ಹಿಂದಿರುಗಿಸತಕ್ಕದ್ದು.
4. ಈ ಆದೇಶದ ಪ್ರತಿಗಳನ್ನು ನಿಯಮಾನುಸಾರ ಉಭಯಪಕ್ಷಕಾರರಿಗೆ ಉಚಿತವಾಗಿ ನೀಡತಕ್ಕದ್ದು.
(ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ, ಬೆರಳಚ್ಚು ಮಾಡಿಸಿ, ತಪ್ಪುಗಳನ್ನು ನೋಡಿ ಸರಿಪಡಿಸಿ ಅಂತಿಮ ಆದೇಶವನ್ನು 17ನೇ ನವೆಂಬರ್ 2022 ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಲಾಯಿತು)
(ರೇಣುಕಾದೇವಿ ದೇಶ್‍ಪಾಂಡೆ)ಮಹಿಳಾ ಸದಸ್ಯರು
(ಹೆಚ್.ಜನಾರ್ಧನ್)ಸದಸ್ಯರು
(ಎಂ.ಶೋಭಾ)ಅಧ್ಯಕ್ಷರು
ಅನುಬಂಧ
ಫಿರ್ಯಾದುದಾರರ ಪರ ವಿಚಾರಣೆ ಮಾಡಿದ ಸಾಕ್ಷಿಗಳ ಪಟ್ಟಿ; - ಇಲ್ಲ -
ಎದುರುದಾರರ ಪರ ವಿಚಾರಣೆ ಮಾಡಿದ ಸಾಕ್ಷಿಗಳ ಪಟ್ಟಿ; - ಇಲ್ಲ -
(ರೇಣುಕಾದೇವಿ ದೇಶ್‍ಪಾಂಡೆ)ಮಹಿಳಾ ಸದಸ್ಯರು
(ಹೆಚ್.ಜನಾರ್ಧನ್)ಸದಸ್ಯರು
(ಎಂ.ಶೋಭಾ)ಅಧ್ಯಕ್ಷರು